ಸತ್ನಾಮಿ ಪಂಥದಿಂದ (ನೋಡಿ) ಕವಲೊಡೆದ ಒಂದು ಪಂಥ. ಸತ್ನಾಮಿಗಳು ನಿರಾಕಾರನಾದ, ಏಕೈಕನಾದ ದೇವರ ನಾಮವನ್ನೇ ಜಪಿಸುವವರು, ಸ್ತೋತ್ರ ಮಾಡುವವರು; ವಿಗ್ರಹಾರಾಧಕರಲ್ಲ. ರಾಮದಾಸ್, ಕಬೀರ್ ಮೊದಲಾದವರು ಈ ಪಂಥದ ಪ್ರೇರಕರು. ಈ ಪಂಥದವರಲ್ಲಿ ಮೂರು ಗುಂಪುಗಳಿವೆ. ಅವುಗಳಲ್ಲಿ ಒಂದು ಗುಂಪಿನವರ ಗುರು ರಾಮದಾಸ್. ಇನ್ನೊಂದು ಗುಂಪಿನವರ ಗುರು ಜಗಜೀವನ್ದಾಸ್. ಮೂರನೆಯದಾದ ಘಾಸೀಗುಂಪಿನವರ ಗುರು ಚಮ್ಮಾರ ಜಾತಿಯ ಘಾಸೀರಾಮ್. ಅವನ ಅನುಯಾಯಿಗಳಿಗೆ ಘಾಸೀಯರೆಂದೇ ಹೆಸರು. ಈ ಪಂಥದವರು ಜಾತಿಭೇದವನ್ನೆಣಿಸದೆ ಎಲ್ಲರೂ ಸತ್ ನಾಮ್ ಜಪಕ್ಕೆ ಅರ್ಹರೆಂದು ಭಾವಿಸುತ್ತಾರೆ. ಈ ಪಂಥದವರ ಮುಖ್ಯ ಕೇಂದ್ರ ಛತ್ತೀಸ್ಘರ್ ಪ್ರಾಂತ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಇವರ ಸಂಖ್ಯೆ 4,00,000 ಇತ್ತು. ಇವರಲ್ಲಿ ಎರಡು ಸಾವಿರ ಜನರನ್ನು ಬಿಟ್ಟರೆ ಉಳಿದವರೆಲ್ಲ ಚಮ್ಮಾರರು. 	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ